ಯ್ಯೂ ಟ್ಯೂಬ್ ಅಥವಾ ಅಂತರ್ಜಾಲದಲ್ಲಿ ಇಂದು ಅನೇಕ ಮಾಹಿತಿಗಳನ್ನು ನಾವು ಶೋಧಿಸಬಹುದು. ಇಡೀ ಜಗತ್ತಿನ ಮಾಹಿತಿ ಕೇವಲ ಬೆರಳ ತುದಿಯಲ್ಲಿ ಸಿಗುವ ಇಂದಿನ ಯುಗದಲ್ಲಿ ಶಿಕ್ಷಕರು ಹೊಸತನಕ್ಕೆ ತೆರೆದುಕೊಳ್ಳುವ ಸಾಕಷ್ಟು ಅವಕಾಶಗಳಿವೆ. ತಮ್ಮ ತರಗತಿಯಲ್ಲಿ ಅಂತರ್ಜಾಲವನ್ನು ಬಳಸಿಕೊಂಡು ನಾವೀನ್ಯತೆಯಿಂದ ಪಾಠ ಮಾಡಲು ಸಾಧ್ಯವಿದೆ. ಅದರಂತೆ ಮಾನ್ಯ ಅಪರ ಆಯುಕ್ತರು ಕಲಬುರಗಿ ಇವರು ಸೂಚಿಸಿದಂತೆ ಪ್ರತಿ ನಿತ್ಯ ನಾನು ನೋಡಿದ ವಿಡಿಯೋ ಅಥವಾ ವಿವಿಧ ಸಂಪನ್ಮೂಲಗಳ ಬಗ್ಗೆ ಇಲ್ಲಿ ಕೆಲವು ಟಿಪ್ಪಣಿಗಳನ್ನು ಹಂಚಿಕೊಂಡಿದ್ದೇನೆ.
ದಿನಾಂಕ : ೧೮/೦೭/೨೦೨೦, ಶನಿವಾರ:
೧. ಪ್ರೆಸೆಂಟ್ ಸಾರ್ : ಕಿರುಚಿತ್ರ
ಪ್ರೆಸೆಂಟ್ ಸಾರ್ : ಇದೊಂದು ಗಡಿಭಾಗದಲ್ಲಿನ ಸರ್ಕಾರಿ ಕನ್ನಡ ಶಾಲೆಗಳ ದುಃಸ್ಥಿತಿಯ ಬಗ್ಗೆ ಇರುವ ಒಂದು ಕಿರು ಚಿತ್ರ ಇದಾಗಿದೆ. ಫ್ರೆಂಚ್ ಕಥೆಗಾರ ಅಲ್ಫಾನ್ಸೋ ದೋದೇ ಅವರ ಡಿ ಲಾಸ್ಟ್ ಲೆಸೆನ್ ಎಂಬ ಕಥೆಯ ಕನ್ನಡ ರೂಪಾಂತರವೇ ಕೊನೆಯ ಪಾಠ. ಕನ್ನಡದ ಪ್ರಮುಖ ಕಥೆಗಾರರಾದ ಶ್ರೀ ಕೇಶವ ಮಳಗಿ ಅವರು ಅನುವಾದಿಸಿರುವ ಕೊನೆಯ ಪಾಠ ಎಂಬ ಕಥೆಯನ್ನು ನವೀನ್ ಸಾಗರ್ ಎಂಬುವವರು ಚಿತ್ರರೂಪಕ್ಕೆ ತಂದು ನಿರ್ದೇಶಿಸಿದ ಕಿರುಚಿತ್ರ ಇದು. ಗಡಿ ಭಾಗದಲ್ಲಿ ಖಾಸಗಿ ಶಾಲೆಗಳ ಪ್ರಭಾವದಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕವಿಮೆಯಾಗುತ್ತಿರುವ ಇಂದಿನ ವಾಸ್ತವತೆಗೆ ಹಿಡಿದ ಕನ್ನಡಿ ಇದಾಗಿದೆ. ಅಲ್ಲಿಯ ಶಿಕ್ಷಕನೊಬ್ಬ ಕನ್ನಡವನ್ನು ಆ ಗಡಿಭಾಗದಲ್ಲಿ ಉಳಿಸಲು ಪಡುವ ಪ್ರಯತ್ನ, ತನ್ನ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕಾಯ್ದುಕೊಳ್ಳುವ ತುಡಿತ ಪ್ರತಿಯೊಂದನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದೆ. ಚಿತ್ರದುದ್ದಕ್ಕೂ ನಮ್ಮೊಳಗಿನ ಶಿಕ್ಷಕನನ್ನು ಖಾಸಗಿ ಶಾಲೆಗಳ ಹಾವಳಿಯ ಮಧ್ಯೆ ನಮ್ಮದೇ ಶಾಲೆಯನ್ನು ಹೇಗೆಲ್ಲ ಉಳಿಸಬಹುದು ಎಂಬುದನ್ನು ಚಿಂತನೆಗೆ ಈಡು ಮಾಡುತ್ತದೆ.
ದಿನಾಂಕ: ೧೮/೦೭/೨೦೨೦, ಶನಿವಾರ
೨. ಜಾನಕಿ : ಕಿರು ಚಿತ್ರ
ಜಾನಕಿ ಎಂಬ ಅದ್ಭುತ ಕಿರುಚಿತ್ರವನ್ನು ನಿರ್ಮಿಸಿದವರು ರೇಣುಕಾ ಕಂಬಳಿ ಅವರು. ಈ ಕಿರುಚಿತ್ರಕ್ಕೆ ಶಿಕ್ಷಣದ ಹಿನ್ನೆಲೆಯುಳ್ಳ ಕಥೆಯೊಂದನ್ನು ಹೆಣೆದವರು ಕೊಪ್ಪಳದ ಶಿಕ್ಷಕ ಮಿತ್ರರಾದ ಸುರೇಶ ಕಂಬಳಿ ಅವರು. ಈ ಅದ್ಭುತವಾದ ಕಥೆಯನ್ನು ಚಿತ್ರದ ರೂಪಕ್ಕೆ ತಂದು ನಿರ್ದೇಶಿಸಿದವರು ಅವಿನಾಶ್ ಚವ್ಹಾಣ್ ಅವರು. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಇನ್ನೂ ಗಗನ ಕುಸುಮವೇ ಸರಿ ಅಥವಾ ಕೇವಲ ಪ್ರಾಥಮಿಕ ಹಂತದವರೆಗೆ ಮಾತ್ರ ಕಲಿಸುವುದುಂಟು. ಈ
ಕಿರುಚಿತ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯ ವಿಪರೀತ ಕುಡಿಯುವ ಚಟದಿಂದಾಗಿ ಶಿಕ್ಷಣದಿಂದ ವಂಚಿತಳಾಗಿರುತ್ತಾಳೆ. ಕುಡಿದು ಕುಡಿದು ತಂದೆ ಸಾವಿಗೀಡಾದಾಗ ತನ್ನ ತಾಯಿಯ ಬೆಂಬಲದಿಂದಾಗಿ ಮತ್ತೆ ಜಾನಕಿ ಶಾಲೆ ಸೇರುತ್ತಾಳೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಾಗೂ ಕ್ರೀಡೆಯಲ್ಲಿ ಸಾಧನೆಗಯ್ಯುತ್ತಾಳೆ. ಈ ವಿಡಿಯೋದಿಂದ ನಾವು ಶಿಕ್ಷರಾದವರು ತಿಳಿದುಕೊಳ್ಳುವುದೇನೆಂದರೇ ನಮ್ಮ ಗ್ರಾಮದಲ್ಲಿ ಅಥವಾ ಸುತ್ತಮುತ್ತಲೂ ಇರುವ ಶಿಕ್ಷಣ ಅವಕಾಶ ವಂಚಿತ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿ ಅವರಿಗೆ ವಿದ್ಯಾದಾನ ಮಾಡಿದರೆ ನಮ್ಮ ಸರ್ಕಾರದ ಆಶಯಗಳಲ್ಲೊಂದಾದ ಸರ್ವರಿಗೂ ಶಿಕ್ಷಣ ಸಿದ್ಧವಾಗುತ್ತದೆ.
ದಿನಾಂಕ : ೧೯/೦೭/೨೦೨೦, ಭಾನುವಾರ
೩. ಟೈಮ್ ಬಾಂಬ್ :
ಗುರಗಾಂವ್ ದಲ್ಲಿನ ಸೋಶಿಯಲ್ ಕ್ಲೌಡ್ ವೆಂಚರ್ಸ್ ಎಂಬ ಸಂಸ್ಥೆ ಹಾಗು ಭಾರತದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (GAIL ) ಇವ್ರು ತಯಾರಿಸಿದ ಒಂದು ಸಾಕ್ಷ್ಯ ಚಿತ್ರ ಟೈಮ್ ಬಾಂಬ್. ನಾವುಗಳು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದ್ದರೂ ಭೂಮಿಯ ಮೇಲೆ ಹೆಚ್ಚುತ್ತಿರುವ ಅತಿಯಾದ ವಾಯು ಮಾಲಿನ್ಯದಿಂದಾಗಿ ನಮ್ಮ ಮುಂದಿನ ಭವಿಷ್ಯ ಎಷ್ಟು ಯಾತನಾಮಯವಾಗಿರುತ್ತದೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದರಿಂದ ನಾವು ತಿಳಿದುಕೊಂಡಿದ್ದೇನೆಂದರೆ ನಾವು ಎಷ್ಟೇ ಮುಂದುವರೆದರೂ ನಮಗೆ ಬದುಕಲು ಬೇಕಾಗಿರುವುದು ಸುಂದರ ಸುರಕ್ಷಿತ ಪರಿಸರ. ನಮ್ಮ ಜೀವವಾಯು ಆಕ್ಸಿಜನ್. ನಮ್ಮ ತರಗತಿಯ ಮಕ್ಕಳಿಗೆ ಈ ವಿಡಿಯೋ ತೋರಿಸುವುದರ ಮೂಲಕ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಯಾಕೆ ಮತ್ತು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು ತಿಳಿಸಲು ಸಹಾಯವಾಗುತ್ತದೆ.
ದಿನಾಂಕ : ೧೯/೦೭/೨೦೨೦, ಭಾನುವಾರ
೪. ಮೇಘಶಾಲಾ App
ಬೆಂಗಳೂರಿನ ಖ್ಯಾತ ಗಣಿತ ಶಿಕ್ಷಕರಾದ ಜ್ಯೋತಿ ತ್ಯಾಗರಾಜನ್ ಹಾಗೂ ಬೆಂಗಳೂರಿನ ಎಂಟರ್ಪ್ರೀನರ್ ಆದ ಮನೋಜ್ ಕುಮಾರ್ ಅವರ ಟೀಮಿನೊಂದಿಗೆ ಶುರುವಾದ ಮೇಘಶಾಲಾ ಎಂಬ ಸಂಸ್ಥೆ ಮೇಘಶಾಲಾ app ನ್ನು ರಚಿಸಿದೆ. ಬಹುತೇಕ ಎಲ್ಲ ರಾಜ್ಯಗಳ ಪಠ್ಯ ವಿಷಯವನ್ನು ಆಧರಿಸಿ ಸುಂದರ ಸ್ಲೈಡ್ ಗಳ ಮೂಲಕ ಇಂಟರಾಕ್ಟಿವ್ ಪ್ರಶ್ನೆಗಳು ಹಾಗೂ ವಿಡಿಯೋಗಳು ಇಲ್ಲಿ ಲಭ್ಯವಿವೆ. ಲಾಕ್ ಡೌನ್ ಅವಧಿಯಲ್ಲಿ ನಾನು ಇಲ್ಲಿನ ವಿಡಿಯೋಗಳನ್ನು ಬಳಸಿಕೊಂಡು ನನ್ನ ೬-೭ ತರಗತಿಗಳ ವಿದ್ಯಾರ್ಥಿಗಳಿಗಾಗಿ ವಿಡಿಯೋ ಪಾಠಗಳನ್ನು ತಯಾರಿಸಿದ್ದೇನೆ. ಇಲ್ಲಿನ ಪಾಠಗಳು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಶಿಕ್ಷಕರಿಗೂ ಸಹಾಯಕವಾಗಿವೆ. ಇದು ಆಂಡ್ರಾಯಿಡ್ ಮೊಬೈಲ್ ನಲ್ಲೂ ಲಭ್ಯವಿದ್ದು ಸುಲಭವಾಗಿ ವಿವಿಧ ಪಾಠಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ದಿನಾಂಕ : ೨೦/೦೭/೨೦೨೦, ಸೋಮವಾರ
೫. ಖಾನ್ ಅಕಾಡೆಮಿ
೨೦೦೫ರಲ್ಲಿ ಸಾಲ್ ಖಾನ್ ಎಂಬುವವರು ತಮ್ಮ ಸಂಬಂಧಿಕರ ಮಕ್ಕಳಿಗಾಗಿ ಗಣಿತವನ್ನು ಕಲಿಸಲು ತಯಾರಿಸಿದ ಒಂದು ವೆಬ್ ಸೈಟ್ ಇದಾಗಿದೆ. ಇಲ್ಲಿ ಗಣಿತಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಲಭ್ಯವಿವೆ. ನಾನು ನನ್ನ ತರಗತಿಯಲ್ಲಿ ಅನೇಕ ಬಾರಿ ಇಲ್ಲಿನ ವಿಡಿಯೋಗಳನ್ನು ಬಳಸಿಕೊಂಡಿದ್ದೇನೆ. ನಾನು ಅತಿ ಹೆಚ್ಚು ವಿಡಿಯೋಗಳನ್ನು ಇಲ್ಲಿಂದಲೇ ನೋಡಿ ನನಗೆ ತರಗತಿ ಬೋಧನೆಯಲ್ಲಿ ಉಂಟಾಗುವ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತೇನೆ. ಹಾಗೂ ನಾನು ಈ ವೆಬ್ ಸೈಟ್ ನಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದ್ದೇನೆ. ಇಲ್ಲಿ ಅನೇಕ ಅಂತರ್ಕ್ರಿಯಾತ್ಮಕ ವಿಡಿಯೋಗಳಿದ್ದು ನನ್ನ ಪಾಠಯೋಜನೆ ಹಾಗೂ ಘಟಕಯೋಜನೆಗೆ ಸಾಕಷ್ಟು ರೀತಿಯಲ್ಲಿ ಅನುಕೂಲವಾಗಿದೆ.
೬. ಇಂಡಿಯಾ ಲಿಟರಸಿ ಪ್ರಾಜೆಕ್ಟ್ (ILP )
ಲಾಕ್ ಡೌನ್ ಅವಧಿಯಲ್ಲಿ ನಾನು ರಿಸೋರ್ಸ್ ಟೀಚರ್ಸ್ ಎನ್ನುವ ಗ್ರೂಪ್ ನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೆ. ಆಗ ನಮ್ಮ ಮಾನ್ಯ ಅಪರ ಆಯುಕ್ತರು ಈ ಇಂಡಿಯಾ ಲಿಟರಸಿ ಪ್ರಾಜೆಕ್ಟ್ ನ ಬಗ್ಗೆ ಮಾಹಿತಿ ನೀಡಿದ್ದರು. ಇದರಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ವೃತ್ತಿ ಕೌಶಲ ಹೆಚ್ಚಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದ್ದರು. ಅದರಂತೆ ಆಗಿನಿಂದ ಇಲ್ಲಿಯವರೆಗೂ ನಾನು ಈ ವೆಬ್ ಸೈಟ್ ಮೂಲಕ ಅನೇಕ ಮಾಹಿತಿಗಳನ್ನು ಹಾಗೂ ಸಂಪನ್ಮೂಲಗಳನ್ನು ಪಡೆದುಕೊಂಡಿದ್ದೇನೆ. ಇಲ್ಲಿ ಅನೇಕ ಪಾಠಗಳ ಪ್ರೆಸೆಂಟೇಷನ್ ಗಳು(ಪಿಪಿಟಿ) ಹಾಗು ಪಿಡಿಎಫ್ ಗಳ ರೂಪದಲ್ಲಿ ಸಂಪನ್ಮೂಲಗಳು ಲಭ್ಯವಿವೆ. ನಮ್ಮ ಪಾಠಯೋಜನೆ ಹಾಗೂ ಘಟಕ ಯೋಜನೆಗಳಿಗೆ ಇವು ತುಂಬಾ ಸಹಾಯ ಮಾಡಬಲ್ಲವು. ಹೀಗಾಗಿ ನೀವೂ ಒಮ್ಮೆ ಇಲ್ಲಿ ಭೇಟಿ ಕೊಡಿ.
ದಿನಾಂಕ : ೨೧/೦೭/೨೦೨೦, ಮಂಗಳವಾರ
೭. ಇ - ಪಾಠಶಾಲಾ
೧೯೬೧ ರಲ್ಲಿ ರಾಷ್ಟೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಏನ್ ಸಿ ಇ ಆರ್ ಟಿ ) ಸ್ಥಾಪಿತವಾಗಿ ವಿವಿಧ ರಾಜ್ಯಗಳ ಶಿಕ್ಷಣ ನಿರ್ದೇಶನಾಲಯಗಳಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಿರುವ ನಮ್ಮ ದೇಶದ ಸ್ವಾಯತ್ತ ಸಂಸ್ಥೆ ಇದಾಗಿದೆ. ಇದು 'ಇ - ಪಾಠಶಾಲಾ' ಎಂಬ ವೆಬ್ ಸೈಟ್ ಹೊಂದಿದ್ದು ಸಾಕಷ್ಟು ರೀತಿಯ ಶೈಕ್ಷಣಿಕ ಸಂಪನ್ಮೂಲಗಳನ್ನು ನೀಡುತ್ತಿದೆ. ಇಲ್ಲಿ ವಿವಿಧ ಭಾಷೆಗಳಲ್ಲಿ ಆಡಿಯೋ ಮತ್ತು ವಿಡಿಯೋ ಪಾಠಗಳು ಲಭ್ಯವಿವೆ. ನಾನು ಈ ಅವಧಿಯಲ್ಲಿ ಇಲ್ಲಿನ ಕೆಲವು ಪಾಠಗಳನ್ನು ಆಲಿಸಿದ್ದೇನೆ ಮತ್ತು ವೀಕ್ಷಿಸಿದ್ದೇನೆ. ಆದರೆ ಇಲ್ಲಿ ಕನ್ನಡ ಭಾಷೆಯಲ್ಲಿ ಸಂಪನ್ಮೂಲಗಳು ಇಲ್ಲ. ನೀವೂ ಒಮ್ಮೆ ಕೊಡಿ.
೮. ಚಾಕ್ ಅಂಡ್ ಡಸ್ಟರ್ :
ಈ ಚಿತ್ರದಿಂದ ಶಿಕ್ಷರನ್ನು ಸಮಾಜ ಯಾವ ರೀತಿ ಕಾಣುತ್ತದೆ ಮತ್ತು ಶಿಕ್ಷರಾದವರು ಯಾವ ರೀತಿ ಇಂದಿನ ಸ್ಥಿತಿಗತಿಗೆ ಅಪ್ ಡೇಟ್ ಆಗಿರಬೇಕು ಎಂಬುದನ್ನು ತಿಳಿಸುತ್ತದೆ. ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಯಾವ ರೀತಿ ಪ್ರಿಯವಾಗುತ್ತಾನೆ ಎಂಬುದನ್ನು ಇದು ತಿಳಿಸುತ್ತದೆ.
ದಿನಾಂಕ : ೨೨/೦೭/೨೦೨೦, ಬುಧವಾರ
TED TALKS :
ನಾನು ತುಂಬಾ ಇಷ್ಟ ಪಡುವ ಯ್ಯು ಟ್ಯೂಬ್ ಚಾನೆಲ್ ಇದು. ಇಲ್ಲಿ ಸೀಮಾ ಬನ್ಸಲ್ ಎಂಬುವವರು ಭಾರತದಲ್ಲಿನ ಶಿಕ್ಷಣ ಪದ್ಧತಿಯ ಬಗ್ಗೆ ಅದ್ಭುತವಾಗಿ ಮಾತಾಡಿದ್ದಾರೆ. ಶಿಕ್ಷಣವನ್ನು ಹೇಗೆ ನಾನು ಗ್ರಾಮದ ಪ್ರತಿಯೊಬ್ಬ ಕಲಿಕಾರ್ಥಿಯ ಬಳಿಗೆ ಶಿಕ್ಷಕರನ್ನುಪಯೋಗಿಸಿಕೊಂಡು ಒಯ್ಯಬಹುದು ಎಂಬುದನ್ನು ವಿವರಿಸಿದ್ದಾರೆ.
ದಿನಾಂಕ : ೨೩/೦೭/೨೦೨೦, ಗುರುವಾರ
TED TALKS :ಸರ್ ಕೆನ್ ರಾಬಿನ್ ಸನ್
ಈ ವಿಡಿಯೋದಲ್ಲಿ ಸರ್ ಕೆನ್ ರಾಬಿನ್ ಸನ್ ಅವರು ಶಾಲೆಗಳು ಹೇಗೆ ಮಕ್ಕಳ ಸ್ರುಕ್ಜನಾತ್ಮಕತೆಯನ್ನು ಹ್ಕೊಳ್ಳುತ್ತಿವೆ ಎಂಬುದನ್ನು ತುಂಬಾ ವಿಷಾದವ್ವಾಗಿ ಹೇಳಿದ್ದಾರೆ. ಮಕ್ಕಳ ಸೃಜನಾತ್ಮಕತೆಯನ್ನು ಗುರಿಯಾಗಿಟ್ಟುಕೊಂಡು ಪಠ್ಯ ವಸ್ತು ರಚಿಸಿ ಕಲಿಸಿದರೆ ಮಕ್ಕಳು ಅದ್ಭುತವಾಗಿ ಕಲಿಯಬಲ್ಲರು ಎಂದು ಅವರು ವಿವರಿಸಿದ್ದಾರೆ.
ದಿನಾಂಕ : ೨೪/೦೭/೨೦೨೦, ಶುಕ್ರವಾರ
No comments:
Post a Comment