ಕೋವಿಡ್ ೧೯ ಎಂಬ ಕಣ್ಣಿಗೆ ಕಾಣದ ವೈರಾಣು ಬಹುಶಃ ನಮ್ಮ ಬದುಕಿನ ಸಾಕಷ್ಟು ಖುಷಿಗಳನ್ನು ಕಸಿದುಕೊಂಡು ಬಿಟ್ಟಿತು ಅಂತ ಅನ್ನಿಸುತ್ತಿದೆ. ಆದರೆ ಮನುಕುಲಕ್ಕೆ ಸಾಕಷ್ಟು ಪಾಠ ಹೇಳಿ ಕೊಟ್ಟಿದೆ. ಬದುಕಿನಲ್ಲಿ ನಾವು ನಡೆದದ್ದೇ ದಾರಿ ಎಂಬಂತೆ ನಾವೆಲ್ಲಾ ಸಾಗುತ್ತಿದ್ದೆವು. ನಮಗೆ ನೀರು, ಗಾಳಿ, ಆಹಾರ ಹಾಗೂ ನಮಗೆ ಆಶ್ರಯ ನೀಡಿದ ಈ ಪ್ರಕೃತಿ ನಮ್ಮ ಕಣ್ಣಿಗೆ ಕಾಣಲೇ ಇಲ್ಲ. ಇಂಥ ವಿಷಣ್ಣ ಸ್ಥಿತಿಯಲ್ಲಿ ಚೀನಾದ ವುಹಾನ್ ನಿಂದ ಬಂದ ಈ ಕೊರೊನ ಎಂಬ ಸೂಕ್ಷ್ಮ ವೈರಿ ನಮ್ಮನ್ನು ಈ ನಾಲ್ಕು ತಿಂಗಳು ಮಾತ್ರ ಕಾಡಿದ್ದು ಅಷ್ಟಿಷ್ಟಲ್ಲ. ಇನ್ನೂ ಕಾಡುತ್ತಲೇ ಇದೆ. ದೇವಾಲಯಗಳಂತಿದ್ದ ಶಾಲಾ ಕಾಲೇಜುಗಳು ಈಗ ಪ್ರಾಯಶಃ ಹಾಳು ದೇವಾಲಯಗಳಂತೆ ತೋರುತ್ತಿವೆ. ಸದಾ ಮಕ್ಕಳ ಕಲರವ ಕಿವಿಗೆ ತಾಕುತ್ತಿರುವಾಗ ನಾವೆಲ್ಲ 'ಗದ್ದಲ ಮಾಡ್ಬೇಡಿ' ಅಂತ ಚೀರುತ್ತಾ ಇದ್ದೆವು. ಈಗ ಶಾಲೆಗೆ ಹೋಗಿ ನೋಡಿದರೆ ಯಾವ ಹಾರಾಟವಾಗಲಿ, ಚೀರಾಟವಾಗಲಿ ಇಲ್ಲ. ಸ್ಮಶಾನ ಮೌನ. ಮಕ್ಕಳಿಲ್ಲದೆ ಶಿಕ್ಷಕರ ಮೌನ ವೇದನೆ ಹೇಳತೀರದು. ಶಾಲೆಗೆ ರಜೆ ಕೊಟ್ಟಾಗ ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ನಾವು ಈಗ ಶಾಲೆ ಶುರುವಾದರೆ ಸಾಕು ಅನ್ನುವಷ್ಟು ರೋಸಿ ಹೋಗಿದ್ದೇವೆ.
ಸುಮಾರು ಎರಡು ತಿಂಗಳು ಲಾಕ್ ಡೌನ್ ಅನುಭವಿಸಿ ಈಗ ಮತ್ತೆ ೧೪ ದಿನಗಳ ಕಾಲ ಮನೆಯಿಂದಲೇ ಕೆಲಸ ನಿರ್ವಹಿಸಬೇಕಾಗಿದೆ. ಅದರಂತೆ ಈ ಲಾಕ್ ಡೌನ್ ಅವಧಿ ಯಾತನಾಮಯವಾಗಿದ್ದರೂ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವತ್ತ ನಮಗೆ ಸಾಕಷ್ಟು ಹೊಳಹುಗಳನ್ನು ನೀಡಿದೆ. ನಾನು ಮತ್ತು ನನ್ನ ಪತ್ನಿ ಇಬ್ಬರೂ ಶಿಕ್ಷಕರಾಗಿರುವ ಕಾರಣ ನಾವು ಈ ಅವಧಿಯನ್ನು ನಮ್ಮ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬೇಕಾಗುವ ವಿವಿಧ ವಿಷಯಗಳನ್ನು ನಮ್ಮೊಳಗೇ ಚರ್ಚಿಸಿದೆವು. ಈ ಅವಧಿಯಲ್ಲಿ ನಾವು ಈ ಕೆಳಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಕಷ್ಟು ಹೊಸ ವಿಷಯಗಳನ್ನು ಅರಿತುಕೊಂಡೆವು.
೧. ವಿವಿಧ ಪ್ರಯೋಗಗಳು :
ವಿಜ್ಞಾನದಲ್ಲಿ ಪ್ರಯೋಗಗಳದ್ದೇ ಬಹುಪಾಲು. ಮಕ್ಕಳಿಗೆ ತಾವೇ ಮಾಡಬಹುದಾದ ಸುಲಭ ಪ್ರಯೋಗಗನ್ನು ಒಂದು ಕಡೇ ಪಟ್ಟಿ ಮಾಡಿ ಮನೆಯಲ್ಲಿ ನಾನು ನನ್ನ ಮಕ್ಕಳೊಂದಿಗೆ ಪ್ರಯೋಗ ಮಾಡಿ ನೋಡಿದೆನು. ಯ್ಯೂ ಟ್ಯೂಬ್ ನಲ್ಲಿ ಇವುಗಳ ಮಾಹಿತಿ ಪಡೆದುಕೊಂಡು ೪,೬,೭ ನೆಯ ತರಗತಿಗಳಲ್ಲಿ ಬರುವ ವಿವಿಧ ಪರಿಕಲ್ಪನೆಗಳ ಕುರಿತಾದ ಪ್ರಯೋಗಳನ್ನು ಮಾಡಿ ಅವುಗಳನ್ನು ನನ್ನ ಯ್ಯು ಟ್ಯೂಬ್ ಚಾನೆಲ್ ಎಜ್ಯೂಕೇರ್ ಮೀಡಿಯಾ ಪ್ಲಸ್ ನಲ್ಲಿ ಅಪ್ ಲೋಡ್ ಮಾಡಿದೆನು.
೨. ನಲಿ ಕಲಿ ವೆಬಿನಾರ್:
ನಮ್ಮ ಕಲಬುರಗಿ ಜಿಲ್ಲೆಯ ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹುಸೇನ್ ವಡಗೇರಿ ಅವರು ನಲಿ ಕಲಿ ಶಿಕ್ಷಕರಿಗಾಗಿ ಪ್ರತಿ ದಿನ ಮಧ್ಯಾಹ್ನ ೩.೦೦ ಗಂಟೆಗೆ ನಲಿ ನಲಿ ಕಲಿ ಶಿಕ್ಷಕರ ಯಶೋಗಾಥೆ ಹಾಗೂ ಉಪನ್ಯಾಸ ಏರ್ಪಡಿಸಿದರು. ಅದರಲ್ಲಿ ಕೇವಲ ಕಲಬುರಗಿ ಜಿಲ್ಲೆಯಿಂದಷ್ಟೇ ಅಲ್ಲದೇ ಬೇರೆ ಜಿಲ್ಲೆಯ ಶಿಕ್ಷಕರೂ ಭಾಗವಹಿಸಿದ್ದರು.. ಅಲ್ಲದೆ ವಿವಿಧ ಅಧಿಕಾರಿ ವೃಂದದವರೂ ಭಾಗವಹಿಸಿ ಮಾರ್ಗದರ್ಶನ ನೀಡಿದರು. ನಲಿ ಕಲಿ ವಿಧಾನದಲ್ಲಿನ ವಿವಿಧ ಕಲಿಕಾಂಶಗಳನ್ನು ಇತರ ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ್, ಸಂಜುಕುಮಾರ್ ಬಂಡಿಮಠ, ಬಸಣ್ಣ ಸಿಗರಗಂಟಿ, ಸುಭಾಷ್ ಬಿರಾದಾರ್ ಮುಂತಾದ ಸಂಪನ್ಮೂಲ ವ್ಯಕ್ತಿಗಳ ವಿಷಯ ಮಂಡನೆಯಲ್ಲಿ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆನು.
೩. ಸೇತುಬಂಧ ಕೈಪಿಡಿ ರಚನೆ :
ಮಾನ್ಯ ಅಪರ ಆಯುಕ್ತರ ನಿರ್ದೇಶನದಂತೆ ನಿರ್ದೇಶಕರಾದ ಶ್ರೀ ಸಕ್ರೆಪ್ಪಗೌಡ ಬಿರಾದಾರ್, ವಿಷಯ ಪರಿವೀಕ್ಷಕರಾದ ಶ್ರೀ ನಾಗೇಂದ್ರಪ್ಪ ಅವರಾದ ಅವರ ಮಾರ್ಗದರ್ಶನದಲ್ಲಿ ಇಡೀ ವಿಭಾಗಕ್ಕೆ ಏಕರೂಪತೆಯ ಸೇತುಬಂಧ ಕಾರ್ಯಕ್ರಮದ ಕೈಪಿಡಿ ಯನ್ನು ತಯಾರಿಸುವ ಜವಾಬ್ದಾರಿ ನೀಡಿದರು. ಅದರಂತೆ ನಮ್ಮ ಕ್ರಿಯಾಶೀಲ ಶಿಕ್ಷಕರ ನಾಯಕರಂತಿರುವ ರವೀಂದ್ರ ರುದ್ರವಾಡಿ ಅವರು ಕರೆ ಮಾಡಿದಾಗ ನಾನು ಅದರಲ್ಲಿ ಭಾಗಿಯಾದೆ. ವಿವಿಧ ಸಂಪನ್ಮೂಲ ಶಿಕ್ಷಕರಾದ ರವಿಚಂದ್ರ ಅತನೂರ, ಸತೀಶ್ ಸನ್ಮುಖ, ಅರ್ಚನಾ ಜೈನ್ , ಗಿರಿಜಾ ಹಂಗರಗಿ, ಅತ್ರಿಕುಮಾರ್, ಸಂಗೀತಾ ವೆರ್ಣೆಕರ್, ಕವಿತಾ ಅಪಚಂದ್,ಪ್ರಶಾಂತ್ ಮಹಾಗಾಂವ್ ಮುಂತಾದವರು ಸೇರಿ ಮೇ ಅಂತ್ಯಕ್ಕೆ ಒಂದು ಒಳ್ಳೆಯ ಸೇತುಬಂಧ ಕೈಪಿಡಿಯನ್ನು ರಚಿಸಿ ಆಯುಕ್ತಾಲಕ್ಕೆ ಸಲ್ಲಿಸಿದೆವು. ಈ ಒಂದು ಕಾರ್ಯದಲ್ಲಿದ್ದಾಗ ಸಾಕಷ್ಟು ಓದು, ಅಧ್ಯಯನ, ಪರಾಮರ್ಶನ ಕೈಗೊಳ್ಳಲು ಸಾಧ್ಯವಾಯಿತು.
೪. ಪ್ರಯೋಗ ದರ್ಪಣ ಕೈಪಿಡಿ ರಚನೆ :
ಅಪರ ಆಯುಕ್ತಾಲಯಡಾ ಅಧಿಕಾರಿಗಳಾದ ಶ್ರೀ ಸಿ.ಎಸ್. ಮುಧೋಳ್ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಜನ ವಿಜ್ಞಾನ ಶಿಕ್ಷಕರು ಸೇರಿ ಪ್ರಯೋಗ ದರ್ಪಣ ಎಂಬ ಕೈಪಿಡಿ ರಚಿಸುವ ಬಗ್ಗೆ ಯೋಜನೆ ತಯಾರಿಸಿದೆವು. ೪ ನೆಯ ತರಗತಿಯಿಂದ ೮ ನೆಯ ತರಗತಿಯವರೆಗಿನ ಪಠ್ಯಪುಸ್ತಕಗಳಲ್ಲಿನ ಎಲ್ಲ ಪ್ರಯೋಗಗಳನ್ನು ತರಗತಿವಾರು ಒಂದೇ ಕಡೆ ಸೇರಿಸಿ ಅವುಗಳನ್ನು ಒಂದು ಪ್ರಯೋಗಾಲಯದ ಕೈಪಿಡಿಯ ತರಹ ರಚಿಸಬೇಕೆಂದುಕೊಂಡೆವು. ನಾನು, ಪ್ರಶಾಂತ್ ಕಂಬಾರ್, ಮಲ್ಲಿಕಾರ್ಜುನ ಸಿರಸಗಿ, ಮೃತ್ಯುಂಜಯ ಹಿರೇಮಠ,ರಾಘವೇಂದ್ರ ಖೋದಾಂಪುರ್ ,ಪ್ರಶಾಂತ್ ಮಹಾಗಾಂವ್ ಮುಂತಾದವರು ಸೇರಿ ಒಂದೊಂದು ತರಗತಿ ಆಯ್ಕೆ ಮಾಡಿಕೊಂಡು ಹೊಸ ಸ್ಫವಿರೂಪದಲ್ಲಿ ಪ್ರಯೋಗಾಲಯ ಕೈಪಿಡಿ ರಚಿಸಿದೆವು. ಸದ್ಯ ಇದು ಅನುಮೋದನೆಗಾಗಿ ಕಾಯುತ್ತಿದ್ದೇವೆ. ಈ ಅವಧಿಯಲ್ಲಿ ಸಾಕಷ್ಟು ಅಧ್ಯಯನ ಪ್ರಯೋಗಳನ್ನು ಪುನಃ ಪುನಃ ಮಾಡಿ ನೋಡುವುದು ಮುಂತಾದವುಗಳಿಂದ ನಮ್ಮ ವೃತ್ತಿ ಕೌಶಲತೆ ಹೆಚ್ಚಲು ಸಹಾಯವಾಯಿತು.
೫. ವಿವಿಧ ತರಬೇತಿಗಳು :
ಕೊವಿಡ್ ೧೯ ಮಧ್ಯೆಯೇ ಶಾಲಾರಂಭದ ಬಗ್ಗೆ, ವಿದ್ಯಾರ್ಥಿಗಳನ್ನು ತಲುಪುವ ಬಗ್ಗೆ ವಿವಿಧ ಶಿಕ್ಷಕರನ್ನು ಸೇರಿಸಿಕೊಂಡ ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಆಯೋಜಿತವಾದ ವಿವಿಧ ವೆಬಿನಾರ್ ಗಳಲ್ಲಿ ಭಾಗವಹಿಸಿ ಅನೇಕ ತರಬೇತಿಗಳನ್ನು ಪಡೆದುಕೊಳ್ಳಲಾಯಿತು. ಡಾ. ವಿ.ಪಿ.ನಿರಂಜನಾರಾಧ್ಯ, ಡಾ. ಕುಮಾರಸ್ವಾಮಿ , ಡಾ. ಹೆಚ್.ಬಿ.ಚಂದ್ರಶೇಖರ್, ಸಿ.ಎಸ್.ಗಣನಾಥ, ಯೋಗೇಶ್ ಮಾಸ್ಟರ್, ಎಫ್.ಸಿ.ಚೇಗರೆಡ್ಡಿಯಂತಹ ವಿವಿಧ ಮಹನೀಯರುಗಳು ನೀಡಿದ ಉಪನ್ಯಾಸಗಳನ್ನು ಆಲಿಸಿ ಅನೇಕ ಶೈಕ್ಷಣಿಕ ಸಂಗತಿಗಳ ಬಗ್ಗೆ ಟಿಪ್ಪಣಿಗಳನ್ನು ಮಾಡಿಕೊಳ್ಳಲಾಯಿತು. ಇದರಿಂದಾಗಿ ಶೈಕ್ಷಣಿಕ ಕ್ಷೇತ್ರದ ವಿಸ್ತಾರದ ಮಾಹಿತಿ ಮತ್ತು ಶಿಕ್ಷಕರಾಗಿ ನಾವು ಹೇಗೆ ಮುಂದುವರೆಯಬೇಕು ಎಂಬುದನ್ನು ತಿಳಿದುಕೊಳ್ಳಲಾಯಿತು.
ಚಂದ್ರಶೇಖರ್ ಪವಾರ್ ಅವರ ನೇತೃತ್ವದಲ್ಲಿ ಆಸಕ್ತ ಶಿಕ್ಷಕರು ಸೇರಿ ಇ -ಕಂಟೆಂಟ್ ಕುರಿತಾದ 'ವೆಬಿನಾರ್ ICT' ಎಂಬ ಗ್ರೂಪ್ ನಲ್ಲಿ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡೆ.
ಅದಲ್ಲದೆ ನಮ್ಮ ಕಲಬುರಗಿ ವಿಭಾಗದಲ್ಲಿ ಆಯುಕ್ತಾಲಯ ಕಲಬುರಗಿ ಹಾಗೂ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾದ ೪-೫ ನೆಯ ತರಗತಿಗೆ ಬೋಧಿಸುವ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದೆ. ಅದೇ ರೀತಿಯ ವಿಭಾಗ ಮಟ್ಟದಲ್ಲಿ ೬-೮ ನೆಯ ತರಗತಿಗೆ ವಿಜ್ಞಾನ ಬೋಧಿಸುವ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದೆ. ಇದರಿಂದ ಮತ್ತಷ್ಟು ಹೆಚ್ಚಿನ ಅಧ್ಯಯನ ಕೈಗೊಳ್ಳಲು ಸಹಾಯವಾಯಿತು.
೬. ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ರಚನೆ :
ಎಸ್ ಎ ಟಿ ಎಸ್ ನಲ್ಲಿ ಪೋಷಕರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸುವಾಗಲೇ ನಾನು ೬ & ೭ ನೆಯ ತರಗತಿಗಳ ವಿದ್ಯಾರ್ಥಿಗಳ ಪೋಷಕರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಒಂದು ವಾಟ್ಸಾಪ್ ಗ್ರೂಪ್ ಮಾಡಿದ್ದೆ. ೧೨ ಜನ ವಿದ್ಯಾರ್ಥಿಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಅವರಿಗೆ ದಿನಾಲೂ ನಾನು ತಯಾರಿಸಿದ ವಿಡಿಯೋ ಪಾಠಗಳನ್ನು, ವಿಷಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕಳಿಸುತ್ತಿದ್ದೆ. ಅದಕ್ಕೆ ಬಹುಪಾಲು ವಿದ್ಯಾರ್ಥಿಗಳು ಪ್ರತಿಕ್ರಿಯಿಸುತ್ತಿದ್ದರು. ಈಗಲೂ ಈ ಪ್ರಕ್ರಿಯೆ ಮುಂದುವರೆದಿದೆ.
೭ ವರ್ಕ್ ಫ್ರಮ್ ಹೋಮ್ :
ಇವೆಲ್ಫ್ಲವೂ ಮನೆಯಿಂದಲೇ ಕೆಲಸವಾದರೂ ಶಾಲೆಗಳಿಗೆ ಎರಡನೇ ಬಾರಿ ರಜೆ ಘೋಷಣೆಯಾದಾಗ ಮಾನ್ಯ ಅಪರ ಆಯುಕ್ತರ ನಿರ್ದೇಶನದಂತೆ ಸಾಧ್ಯವಾದಮಟ್ಟಿಗೆ ಅವ್ರು ನೀಡಿದ ೧೦ ಅಂಶಗಳನ್ನು ಪೂರೈಸುವಲ್ಲಿ ತೊಡಗಿಕೊಂಡೆವು. ನಾನೂ ಮತ್ತು ನನ್ನ ಶ್ರೀಮತಿ ಇಬ್ಬರೂ ಸೇರಿ ವಿವಿಧ ವಿಷಯಗಳನ್ನು ಚರ್ಚಿಸಿ ನೀಡಿದ ಟಾಸ್ಕ್ ಗಳನ್ನೂ ಪೂರೈಸುವಾಗ ಮತ್ತಷ್ಟು ಸಂಪನ್ಮೂಲಗಳನ್ನು ಪರಾಮರ್ಶನ ಮಾಡಿದೆವು. ಯಾವುವು ನಮ್ಮ ನಮ್ಮ ತರಗತಿಗಳಿಗೆ ಸೂಕ್ತವೆನಿಸುತ್ತವೆಯೋ ಅವುಗಳನ್ನು ಆಯ್ದುಕೊಂಡು ಟಿಪ್ಪಣಿ ಮಾಡಿಕೊಂಡೆವು.
ಒಟ್ಟಿನಲ್ಲಿ ಈ ಲಾಕ್ ಡೌನ್ ಒಂದು ಬಗೆಯ ಹಿಂಸೆಯಾದರೂ ನಮ್ಮ ವೃತ್ತಿಪರತೆಯನ್ನು ಅರಿತುಕೊಂಡು ನಮ್ಮ ಜ್ಞಾನಾರ್ಜನೆಗೆ ಸಹಾಯ ಮಾಡಿತು. ಶಿಕ್ಷಕ ವೃತ್ತಿಯನ್ನು ವಿವಿಧ ಆಯಾಮಗಳಿಂದ ದೃಷ್ಟಿಕೋನಗಳಿಂದ ಕಂಡುಕೊಳ್ಳಲು ನೆರವಾಯಿತು. ಕೊವಿಡ್ ೧೯ ರ ನಡುವೆ ಬದುಕಲು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಸಮುದಾಯಲ್ಲಿ ಇದರ ಬಗೆಗೆ ಹರಡಿಕೊಂಡ ಒಂದು ಆತಂಕದ ವಾತಾವರಣವನ್ನು ಹೊಡೆದೋಡಿಸುವ ಪರಿಕ್ರಮಗಳನ್ನು ತಿಳಿಸಿಕೊಟ್ಟಿತು. ಇಲ್ಲಿ ನೀಡಲಾದ ೧೦ ಅಸೈನ್ಮೆಂಟ್ ಗಳು ನಮ್ಮೊಳಗೇ ನಾವು ಇಣುಕುವಂತೆ ಮಾಡಿತು. ಹೊಸ ಮನ್ವಂತರಕ್ಕೆ ದಾರಿ ಮಾಡಿಕೊಟ್ಟಿತು.
*****
No comments:
Post a Comment