ಕೆಲವು ದಿನಗಳಿಂದ ಖಗೋಳಾಸಕ್ತರ ವಾಟ್ಸ್ಯಾಪ್ ಗುಂಪುಗಳಲ್ಲಿ ಒಂದು ಸುದ್ದಿ/ವೀಡಿಯೋ ಹರಿದಾಡುತ್ತಿರುವುನ್ನು ನೋಡುತ್ತಿದ್ದೇನೆ. ಅದು ಸೌರ ಮಂಡಲದ ಆರು ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬರುತ್ತಿವೆ. ಇದು ಅಪರೂಪಕ್ಕೆ ನಡೆಯುವ ಅತ್ಯಂತ ಸಹಜ ಪ್ರಕ್ರಿಯೆ. ಈ ಆರು ಗ್ರಹಗಳೆಂದರೆ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗಳು. ಇದರಲ್ಲಿ ಭೂಮಿ ಇಲ್ಲದೇ ಇರುವುದರಿಂದ ಭೂಮಿಯ ಮೇಲಿನಿಂದ ವೈಜ್ಞಾನಿಕ ಅಧ್ಯಯನಕ್ಕೆ ಹೇಳಿಕೊಳ್ಳುವಂತಹ ಯಾವುದೇ ಲಾಭಗಳಿಲ್ಲ. ಆದರೆ ಖಗೋಳದಲ್ಲಿ ಜನ ಸಾಮಾನ್ಯರಿಗೆ ಅರಿವಿಗೆ ಬಾರದ ಈ ಗ್ರಹಗಳ ಮೆರವಣಿಗೆಗೆ (planet parade) ಯಾಕೆ ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ.
ಸೌರ ಮಂಡಲದಲ್ಲಿ ಒಟ್ಟು ಎಂಟು ಗ್ರಹಗಳಿವೆ. ಮೊದಲು ಒಂಬತ್ತು ಎನ್ನುತ್ತಿದ್ದೆವು. ಆದರೆ ದೀರ್ಘ ಅಧ್ಯಯನದ ನಂತರ ಪ್ಲೂಟೊ ವನ್ನು ಗ್ರಹ ಎಂಬ ಸಿಂಹಾಸನದಿಂದ ಕೆಳಗಿಳಿಸಿ ಕುಬ್ಜ ಗ್ರಹ ಪಟ್ಟಾಭಿಷೇಕ ಮಾಡಲಾಯಿತು. ಇದರಲ್ಲಿ ಆರು ಗ್ರಹಗಳು ಬರಿಯ ಕಣ್ಣಿಗೆ ಕಾಣುವ ಗ್ರಹಗಳಾದರೆ ಯುರೆನಸ್ ದೂರದರ್ಶಕದ ಸಹಾಯದಿಂದ ಶೋಧಿಸಿದ ಗ್ರಹ. ನೆಪ್ಚೂನ್ ಗಣಿತದ ಲೆಕ್ಕಾಚಾರದ ಮೂಲಕ ಸಂಶೋಧಿಸಲ್ಪಟ್ಟ ಗ್ರಹ. ಈ ಯರೇನಸ್ ತನ್ನ ಸಮೀಪದ ಶನಿಯಿಂದ ಎಷ್ಟು ದೂರದಲ್ಲಿದೆಯೆಂದರೆ ಯುರೇನಸ್ ನ ಆವಿಷ್ಕಾರದಿಂದಾಗಿ ಸೌರಮಂಡಲದ ವ್ಯಾಪ್ತಿ ದುಪ್ಪಟ್ಟಾಯಿತು. ಯುರೇನಸ್ ಏಳನೆಯ ಗ್ರಹವಾದರೂ ಅದರ ಕಕ್ಷೆ ಎಂತಹ ಉದ್ದುರುಟು (elliptical) ಎಂದರೆ ಕೆಲವೊಮ್ಮೆ ನೆಪ್ಚೂನ್ ಗಿಂತ ಆಚೆಗೆ ಹೋಗುವುದರಿಂದ ಸೌರಮಂಡಲದ ಅತಿದೂರದ ಗ್ರಹ ಎಂದು ಕರೆಸಿಕೊಳ್ಳುತ್ತದೆ.
ಬರಿ ಕಣ್ಣಿಗೆ ಕಾಣಿಸುವ ಗ್ರಹಗಳು 6. ಮೊದಲನೆಯವ ಬುಧ. ಸೂರ್ಯನಿಗೆ ತೀರಾ ಹತ್ತಿರವಿರುವುದರಿಂದ ಮತ್ತು ಈತ ಹೆಚ್ಚು ಕಡಿಮೆ 18° ಪರಿಣಾಮದ (18° effect) ಪರಿಧಿಯಲ್ಲಿ ಬರುವುದರಿಂದ ಇವನನ್ನು ನೋಡಲು ಕಣ್ಣು ಸೂಕ್ಷ್ಮವಿರಬೇಕು. ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯದ ಮೊದಲು ವರ್ಷದಲ್ಲಿ ಒಂದು ನಾಲ್ಕು ತಿಂಗಳು ಕಾಣಬಹುದಷ್ಟೆ. ಎರಡನೆಯವ ಬೆಳ್ಳಿಯೆಂದೇ ಕರೆಯಲ್ಪಡುವ ಶುಕ್ರ. ತನ್ನಲ್ಲಿನ ಇಂಗಾಲದ ಡೈಆಕ್ಸೈಡ್ ವಾತಾವರಣದಿಂದಾಗಿ ಹೊಳೆಯುವ ಗ್ರಹ. ಸಂಜೆ ಪಡು ಆಕಾಶದಲ್ಲಿ ಬೆಳಿಗ್ಗೆ ಮೂಡಣದಲ್ಲಿ ಕಾಣಿಸುವ ಈತ ಕೆಲವೊಮ್ಮೆ ರಾತ್ರಿ ಸಮಯದ ಅಳತೆಯೂ ಹೌದು. ಮೂರನೆಯವಳು ನಾವು ಬದುಕಿರುವ ಭೂಮಿ. ಕ್ಷಮಯಾ ಧರಿತ್ರಿ. ನಾವು ಮಾಡುವ ತಪ್ಪನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ನಮ್ಮನ್ನು ಸಲಹುವವಳು.
ನಾಲ್ಕನೆಯವನು ಮಂಗಳ. ಸೌರವ್ಯೂಹದ ಕೆಂಪನೆಯ ಗ್ರಹವಾದುದರಿಂದ ಗುರುತಿಸುವುದು ಸುಲಭ. ಎಲ್ಲರಿಗಿಂತ ಹಿರಿಯ ಗುರು. ಶುಕ್ರನಷ್ಟು ಹೊಳಪಿಲ್ಲದಿದ್ದರೂ ಅದೇ ಗಾತ್ರದಲ್ಲಿ ಗೋಚರಿಸುತ್ತಾನೆ. ಸೌರಮಂಡಲದ ಸುಂದರನೆಂದರೆ ಆರನೆಯ ಶನಿ. ದೂರದರ್ಶಕದಲ್ಲಿ ನೋಡುವಾಗ ಬಳೆ ತೊಡಿಸಿದ ಸುಂದರಿಯಂತೆ ಕಾಣುವ ಚೆಲುವ ಸುಂದರಾಂಗ. ಸೂರ್ಯ ಮುಳುಗುತ್ತಿದ್ದ ಹಾಗೆ ನಕ್ಷತ್ರಗಳು ಗೋಚರಿಸುತ್ತವೆ ಎಂದು ನಾವು ಹೇಳುತ್ತೇವೆ. ಆದರೆ ಸೂರ್ಯ ಮುಳುಗುತ್ತಿರುವ ಹಾಗೆ ನಾವು ಮೊದಲು ಕಾಣುವುದು ಗ್ರಹಗಳನ್ನು. ಇದಕ್ಕೆ ಕಾರಣ ಅವು ನಮಗೆ ಬಹಳ ಸಮೀಪದಲ್ಲಿವೆ.
ಭಾರತೀಯ ಪಂಚಾಂಗದಲ್ಲಿ ನವಗ್ರಹಗಳಿದ್ದಾವೆ. ಅದರಲ್ಲಿ ಮಂಗಳ, ಬುಧ, ಗುರು, ಶುಕ್ರ, ಶನಿ ವಿಜ್ಞಾನ ಹೇಳುವ ಗ್ರಹಗಳೇ. ಆದಿತ್ಯ ಸ್ವಯಂಪ್ರಭೆಯುಳ್ಳ ನಕ್ಷತ್ರ ಸೂರ್ಯ. ಸೋಮ ಭೂಮಿಯ ಸುತ್ತ ಸುತ್ತುವ ಉಪಗ್ರಹ ಚಂದ್ರ. ರಾಹು ಕೇತುಗಳು ಭೂಮಿ ಮತ್ತು ಚಂದ್ರರ ಪರಭ್ರಮಣ ಕಕ್ಷೆಗಳು ಪರಸ್ಪರ ಛೇದಿಸುವ ಕಾಲ್ಪನಿಕ ಬಿಂದುಗಳು.
ಭವಿಷ್ಯ ಹೇಳುವವರು ತಮ್ಮ ಲಾಭಕ್ಕಾಗಿ ಹೇಳುವ ಪಂಚಗ್ರಹ ಕೂಟ ಅಥವಾ ಅಷ್ಟಗ್ರಹ ಕೋಟ ಎಂದು ಹೇಳಿ ಸಾರ್ವಜನಿಕರಲ್ಲಿ ನಂಬುಗೆ ಹುಟ್ಟಿಸಿದ ಹಾಗೆ ಈಗ ನೀಡುತ್ತಿರುವ ಷಷ್ಠಿ ಗ್ರಹ ಕೂಟದಿಂದಾಗಬಹುದು ಎಂಬ ಭಯ ನನಗೆ. (ಖಗೋಳ ವಿದ್ಯಮಾನಗಳ ಬಗ್ಗೆ ಸಮಯೋಚಿತವಾಗಿ ಮಾತನಾಡುವ ಉಡುಪಿಯಲ್ಲಿ ಖಗೋಳಾಸಕ್ತರ ಸಂಘವನ್ನು ಹುಟ್ಟು ಹಾಕಿರುವ ಶ್ರೀ ಎ.ಪಿ. ಭಟ್ಟರ ಈ ಬಾರಿಯ ಮೌನ ನನಗೆ ತುಂಬಾ ಇಷ್ಟವಾಗಿದೆ)
ಅಪಶಕುನಗಳ ಬಗ್ಗೆ ಕಟುವಾಗಿ ಟೀಕಿಸುತ್ತಾ ಹಿಂದೂ ಧರ್ಮವನ್ನು ಹೀಗೆಳೆಯುತ್ತೇವೆ. ಆದರೆ ಧಾರಾವಾಹಿಗಳಲ್ಲಿ ದೀಪ ನಂದಿ ಹೋಗುವುದು, ಭಾವಚಿತ್ರ ಬಿದ್ದು ಗಾಜು ಒಡೆಯುವುದು, ಕರಿಮಣಿ ತುಂಡಾಗುವುದು, ಬಟ್ಟೆಗೆ ಬೆಂಕಿ ಹೊತ್ತಿಕೊಳ್ಳುವುದು ಮುಂತಾದವುಗಳನ್ನು ಮುಂದಿನ ಅವಘಡಗಳ ಮುನ್ಸೂಚನೆ ಎಂದು ವೈಭವೀಕರಿಸುವ ನಿರ್ದೇಶಕರನ್ನು ಟೀಕಿಸುವ ಅಥವಾ ಅವುಗಳನ್ನು ವಿರೋಧಿಸುವ ಒಬ್ಬನೇ ಒಬ್ಬ ವಿಚಾರವಾದಿಯನ್ನೂ ನಾನು ನೋಡಿಲ್ಲ.
--- ಶ್ರೀ ದಿವಾಕರ ಶೆಟ್ಟಿ ಹೆಚ್(ಫೇಸ್‌ಬುಕ್ ಗೋಡೆಯಿಂದ)